ಮೈತ್ರಿ ಉಪನಿಷತ್ತು -
ಅತ್ಯಂತ ಪ್ರಾಚೀನವೂ ಮಹತ್ತ್ವಪೂರ್ಣವೂ ಆದ 13 ಪ್ರಮುಖ ಉಪನಿಷತ್ತುಗಳ ಪೈಕಿ ಒಂದು. ಇದನ್ನು ಮೈತ್ರಾಯಣೀ ಉಪನಿಷತ್ತು ಎಂದೂ ಕರೆಯುವುದಿದೆ. ಇದರಲ್ಲಿ ಬರುವ ವಿಚಾರಗಳು ಹೀಗಿವೆ: (1) ಬೃಹದ್‍ರಥ ರಾಜನ ನಿರಾಶವಾದ. (2) ಚಾಲಕತತ್ತ್ವ (3) ಭೂತಾತ್ಮ ಸಿದ್ಧಾಂತ. (4) ಪರಮಾತ್ಮನನ್ನು ಕುರಿತ ಸ್ತೋತ್ರ. (5)ಕೆಲವು ವಿಶ್ವರಚನಾ ಕ್ರಮದ ವಾದಗಳು. (6) ಯಜ್ಞಯಾಗಾದಿ ವಿಷಯಗಳನ್ನು ಕುರಿತ ವಿಚಾರಗಳು (7) ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳು (8) ಬ್ರಹ್ಮನ ವಿವಿಧ ರೂಪಗಳು (9) ನೀತಿ. (10) ಅನುಭಾವದ ಚಿಂತನ.

1 ಬೃಹದ್‍ರಥ ರಾಜ ದೇಹದ ಅನಿತ್ಯತೆಯನ್ನು, ಸಾಂಸಾರಿಕ ಆಶೆಗಳ ತಾತ್ಪೂರ್ತಿಕತೆಯನ್ನು ಮನಗಂಡು, ಮಗನಿಗೆ ರಾಜ್ಯ ಒಪ್ಪಿಸಿ ತಪಸ್ಸಿಗಾಗಿ ಕಾಡಿಗೆ ಹೊರಟು ಹೋಗುತ್ತಾನೆ.  ಶಾಕಾಯನ ಮುನಿ ಆತನಿಗೆ `ಆತ್ಮe್ಞÁನದ ಬದಲು ಸಂಸಾರಕ್ಕೆ ಸಂಬಂಧಪಟ್ಟ ವಿಷಯಗಳ ತೃಪ್ತಿಗಾಗಿ ವರವನ್ನೂ ಕೇಳಿಕೋ ಎಂದಾಗ ಅರಸ ಹೀಗೆ ಹೇಳುತ್ತಾನೆ: `ಈ ಸಂಸಾರದ ಕಾಮ ಉಪಭೋಗದಿಂದ ಬರುವ ಲಾಭವೇನು ? ಈ ದೇಹ ಕೇವಲ ಅಸ್ಥಿ, ಚರ್ಮ, ಸ್ನಾಯು, ಮಜ್ಜೆ, ಮಾಂಸ, ರಕ್ತ, ಮೂತ್ರ, ವಾತ, ಪಿತ್ತ, ಕಫಗಳಿಂದ ಕೂಡಿದೆ. ಕಾಮ, ಕ್ರೋಧ, ಲೋಭ, ಭಯ, ವಿಷಾದ, ಇಷ್ಟ ವಿಯೋಗ, ಅನಿಷ್ಟ, ಸಂಯೋಗ, ಹಸಿವು, ನೀರಡಿಕೆ, ರೋಗ, ಮುಪ್ಪು, ಮೃತ್ಯು, ಶೋಕ-ಇವುಗಳಿಂದ ಕೂಡಿದ ದೇಹ. ಈ ಜಗತ್ತಿನಲ್ಲಿ ಯಾವುದು ಸ್ಥಿರ ? ನೊಣಗಳು, ಕೀಟಗಳು, ಹುಲ್ಲು, ಗಿಡಗಳು, ಹುಟ್ಟಿ ಸಾಯುತ್ತವೆ. ಸಾಗರಗಳು ಬತ್ತುತ್ತವೆ. ಪರ್ವತಗಳು ಕಡಿದು ಬೀಳುತ್ತವೆ. ಧ್ರುವತಾರೆಗಳು ಸ್ಥಾನಪಲ್ಲಟವಾಗುತ್ತದೆ. ದೇವತೆಗಳಿಗೂ ಕೂಡ ಸ್ಥಾನಾಂತರವಿದೆ. ಬೃಹದ್‍ರಥನ ನಿರಾಶವಾದ ಈ ಮಾತುಗಳಲ್ಲಿ ಸಾಕಷ್ಟು ಶಕ್ತಿಯುತವಾಗಿ ಬಂದಿದೆ.

2 ದೇಹ ಬಂಡೆಯಂತೆ ಜಡ. ದೇಹದ ಚಲನೆಗೆ ಆತ್ಮ ನಿಮಿತ್ತ ಕಾರಣ. `ಅವನು ಶುದ್ಧ, ಪವಿತ್ರ, ಶಾಂತ, ಶಾಶ್ವತ, ಸ್ವತಂತ್ರ ಪ್ರಜಾಪತಿ ವಾಲಿಖಿಲ್ಯರಿಗೆ ಬೋಧಿಸಿದ ತತ್ತ್ವವಿದು.

3 ಸೂಕ್ಷ್ಮ ಹಾಗೂ ಸ್ಥೂಲ ಪಂಚಮಹಾಭೂತಗಳಿಂದ ಕೂಡಿದ ಆತ್ಮ ಭೂತಾತ್ಮ. ಈತ ದೈಹಿಕ ಬಾಧೆ, ನೋವುಗಳಿಂದ ಒಳಗಾದವ. ಅಸ್ಥಿ, ಚರ್ಮ ರಕ್ತ, ಮಾಂಸ, ಮಲಮೂತ್ರಗಳಿಂದ ಕೂಡಿದ ಅಶುದ್ಧನಾದವ. ಈತ ತಮೋಗುಣದಿಂದ, ಕಾಮನೆಗಳಿಂದ ಕೂಡಿದವ, ತುಂಟ, ಭ್ರಾಂತಿ ಸ್ವರೂಪ, ಅಸ್ವತಂತ್ರ.

4 ಪರಮಾತ್ಮನನ್ನು ಕುರಿತ ಸ್ತೋತ್ರದಲ್ಲಿ ಕಾತ್ಯಾಯನ ವಿಶ್ವಾತ್ಮನನ್ನು ಕುರಿತು ಹೀಗೆ ಸ್ತುತಿಸುತ್ತಾನೆ : `ನೀನು ಬ್ರಹ್ಮ, ನೀನು ವಿಷ್ಣು, ನೀನು ರುದ್ರ, ನೀನು ಪ್ರಜಾಪತಿ, ಅಗ್ನಿ, ವರುಣ, ವಾಯು, ಇಂದ್ರ, ಚಂದ್ರ, ಯಮ, ನಿನ್ನಲ್ಲಿ ನೀನು ಅಚಿಂತ್ಯ ರೂಪ ತಾಳಿದೆ. ಓ, ಪ್ರಜಾಪತಿ ನಿನಗೆ ಮಂಗಳವಾಗಲಿ. . . . . . . ನೀನು ಅಚಿಂತ್ಯ ಅನಾದಿ ಮತ್ತು ಅನಂತ. . . . . . .

5 ಮೂಲದಲ್ಲಿ ತಮಸ್ಸೊಂದೇ ಇದ್ದಿತು. ಅದು ಪರಮಾತ್ಮನಲ್ಲಿದ್ದಿತು ಎಂದು ಹೇಳಲಾಗಿದೆ. ಪರಮಾತ್ಮನ ಚಾಲನೆಯ ಮೇರೆಗೆ ಇದು ರಜಸ್ಸಾಗಿ, ಅನಂತರ ಸತ್ತ್ವವಾಗಿ ಪರಿವರ್ತನೆಗೊಂಡು ಅನಂತರ ಜೀವರಸವಾಗಿ ಪ್ರವಹಿಸಿತು. ಈ ಜೀವರಸ ಪೂರ್ಣವಾಗಿ ಪ್ರe್ಞÁಮಯ. ಮನುಷ್ಯನಲ್ಲಿ ಕ್ಷೇತ್ರಜ್ಞನಾಗಿ ಕಾಣಿಸಿಕೊಳ್ಳುವುದು.

6 ಇಲ್ಲಿ ಎರಡು ವಾದಗಳುಂಟು. ಮೊದಲನೆಯದು ವಾದದ ಪ್ರಕಾರ ಮೂಲದಲ್ಲಿ ಅಮಿತವಾದ, ಅನುಚಿತವಾದ ಬ್ರಹ್ಮನಿದ್ದ. ದೇಶ ಆತನ ದೇಹವಾಗಿತ್ತು. ದೇಶದಿಂದ ಈ ಜಗತ್ತು ಸೃಷ್ಟಿಯಾಯಿತು.

(i) ಸೂರ್ಯನನ್ನು ಸವಿತುೃದೇವನೆಂದು, ಬ್ರಹ್ಮನೆಂದು ಹೊಗಳಲಾಗಿದೆ. ಸವಿತುೃವನ್ನು ಭಜಿಸುವುದರಿಂದ ಭಕ್ತನಲ್ಲಿ ಒಳ್ಳೆಯ ವಿಚಾರಗಳು ಉದಿಸುವವು. (ii) ಯಜ್ಞಯಾಗಾದಿಗಳಿಗೆ ಹೆಚ್ಚಿನ ಸ್ಥಾನಕೊಡಲಾಗಿದೆ. ವೀರ್ಯ, ಸ್ವರ್ಗ, ಅಮರತ್ವದ ಪ್ರಾಪ್ತಿಗಾಗಿ ಯಜ್ಞಯಾಗಾದಿಗಳನ್ನು ಮಾಡಬೇಕೆಂದೂ ಜಗತ್ತು ಮತ್ತು ವ್ಯಕ್ತಿ ಯಜ್ಞಯಾಗಾದಿಗಳಿಂದ ಆಧಾರವನ್ನು ಹೊಂದಿವೆಯೆಂದೂ ಅವುಗಳಿಂದ ಪರಿಪೋಷಿತವಾಗಿವೆಯೆಂದೂ ಹೇಳಲಾಗಿದೆ.

7 ಏಳನೆಯ ಪ್ರಕರಣದ 14 ಮತ್ತು 16ನೆಯ ಭಾಗಗಳು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಒಳಗೊಂಡಿವೆ. ಸೂರ್ಯ ಕಾಲದ ಮೂಲ ಕಾಲದಲ್ಲಿದ್ದು ಆತ ಚಂದ್ರ, ನಕ್ಷತ್ರಗಳು ಗ್ರಹಗಳು, ವರ್ಷ ಮತ್ತು ಇತರ ವಸ್ತುಗಳನ್ನು ಹುಟ್ಟಿಸುತ್ತಾನೆ. ಕಾಲದ ದೃಶ್ಯರೂಪ ವರ್ಷ ವರ್ಷದಲ್ಲಿ ಹನ್ನೆರಡು ತಿಂಗಳು ಇರುತ್ತವೆ. ಸೂರ್ಯ ಇಪ್ಪತ್ತೇಳು ನಕ್ಷತ್ರಗಳನ್ನು ಒಂದು ವರ್ಷದಲ್ಲಿ ಕ್ರಮಿಸುತ್ತಾನೆ. ತಿಂಗಳಿಗೆ 21/2 ನಕ್ಷತ್ರಗಳಂತೆ.

8 (i) ಮೊದಲು ಬ್ರಹ್ಮ ಭೌತಿಕ ಹಾಗೂ ಅಭೌತಿಕ ರೂಪಗಳಲ್ಲಿ ಇದ್ದಾನೆ ಎಂದು ಹೇಳಲಾಗಿದೆ. (ii) ಬ್ರಹ್ಮ ಅನ್ನ ಭೋಕ್ತಾರನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. (iii) ಕಾಲ ಮತ್ತು ಕಾಲಾತೀತ ಸ್ವರೂಪದಲ್ಲಿಯೂ ಬ್ರಹ್ಮ ಗೋಚರಿಸುತ್ತಾನೆ (iv) ಕೊನೆಯದಾಗಿ ಶಬ್ದ ಮತ್ತು ಅಶಬ್ದಗಳ ರೂಪದಲ್ಲಿ ಬ್ರಹ್ಮ ತಲೆದೋರುತ್ತಾನೆ.

9 ಮನಸ್ಸು ಬಂಧನಕ್ಕೆ ಕಾರಣ. ಆಶೆಗಳಿಂದ ತುಂಬಿದ ಮನ ಬಂದಿತ ಮನಸ್ಸು ಶುದ್ಧವಾದಾಗ ಮುಕ್ತಿ ಸಾಧ್ಯ. ಮನೋನಿಗ್ರಹದಿಂದ ನಿಜವಾದ e್ಞÁನ ಮತ್ತು ಮೋಕ್ಷ ಸಾಧ್ಯ. ಧ್ಯಾನದಿಂದ ಪಡೆದ ಮುಕ್ತಿಯೇ ಸುಖವರ್ಣಿಸಲು ಅಸಾಧ್ಯ.

10 ದುಷ್ಟರಿಂದ ದೂರವಿದ್ದು, ವೇದವ್ಯಾಸಂಗ ಮಾಡಿ, ವರ್ಣಾಶ್ರಮ ಧರ್ಮಗಳನ್ನು ಆಚರಿಸುತ್ತ, ಧ್ಯಾನ ಧಾರಣಾಯೋಗಾಭ್ಯಾಸದಿಂದ ಜೀವಿ ಭಗವಂತನನ್ನು ಸೇರುತ್ತಾನೆ. ತನ್ನಿಂದ ಉದಿತವಾದ ಪರಮ ಪ್ರಕಾಶದ ಮಹಾಪೂರದಲ್ಲಿ ತನ್ನ ನಿಜಸ್ವರೂಪವನ್ನು ಅರಿಯುತ್ತಾನೆ. ಅದೇ ಅಮೃತ, ಅಭಯ, ಬ್ರಹ್ಮ. 
(ಕೆ.ಯು.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ